ಅದ್ವಿತೀಯ ಪ್ರಾಕೃತಿಕ ಸೌಂದರ್ಯ,ಪ್ರಾಚೀನತೆ, ಅಪೂರ್ವ ಅರ್ಚನಾ ಬಿಂಬಗಳು, ಸಾನಿಧ್ಯ ವೈವಿಧ್ಯ ಮತ್ತು ದಟ್ಟವಾದ ಜಾನಪದ ಹಿನ್ನೆಲೆಗಳೊಂದಿಗೆ ಭಕ್ತಿಯ ತಾಣವಾಗಿರುವ ಶ್ರೀ ಕ್ಷೇತ್ರವು ಉಡುಪಿ- ಕಾರ್ಕಳ ಹೆದ್ದಾರಿಯಲ್ಲಿ ಮಣಿಪಾಲದಿಂದ ಪೂರ್ವಕ್ಕೆ ಪರ್ಕಳದಿಂದ ೨ಕಿ.ಮೀ ದೂರದಲ್ಲಿದೆ.ವೈಷ್ಣವ ತತ್ವದ ಹರಿಸರ್ವೋತ್ತಮ ವಾಯುಜೀವೋತ್ತಮ ಎಂಬ ವಾಕ್ಯದಂತೆ ಪ್ರಧಾನ ದೇವರಾಗಿ ಮಹಾವಿಷ್ಣು ಮತ್ತು ಉಪಸ್ಥಾನ ಶಕ್ತಿಯಾಗಿ ಮುಖ್ಯಪ್ರಾಣ ದೇವರು ಭಕ್ತರನ್ನು ಪೊರೆಯುತ್ತಿದ್ದಾರೆ.
ಇತಿಹಾಸ ತಜ್ಞ ದಿ|ಗುರುರಾಜ ಭಟ್ಟರ ಅಭಿಪ್ರಾಯದಂತೆ ಹೊಯ್ಸಳ ಶೈಲಿಯ ದೇವಾಲಯವಿದಾಗಿದ್ದು ೧೨ನೆ ಶತಮಾನದ್ದೆಂದು ಅಂದಾಜಿಸಿದ್ದಾರೆ.ಹಿಂದೆ ಪ್ರಧಾನ ದೇವರಾಗಿ ಶ್ರೀರಾಮನ ಮೂರ್ತಿ ಇತ್ತು ಭಿನ್ನಗೊಂಡ ಕಾರಣದಿಂದ ರಾಮನ ಮೂಲರೂಪ ಮಹಾವಿಷ್ಣು ದೇವರನ್ನು ಪ್ರತಿಷ್ಠಾಪಿಸಲಾಗಿದೆ ಎಂಬ ಅಭಿಪ್ರಾಯವಿದೆ.ಆದ್ದರಿಂದ ಪ್ರಾಣದೇವರ ಮೂರ್ತಿ ಮತ್ತೂ ಹಿಂದೆ ಅಂದರೆ ೬ನೆಯ ಶತಮಾನದ್ದಾಗಿದೆ.
ಷಡ್ವರ್ಗ ಮಾದರಿಯ ಗರ್ಭಗುಡಿಯಲ್ಲಿ ಪದ್ಮ,ಶಂಖ,ಚಕ್ರ,ಗದೆಗಳನ್ನು ಧರಿಸಿ,ಸರ್ವಾಭರಣ ಭೂಷಿತನೂ ಮಂದಹಾಸ ಭರಿತನೂ ಆಗಿ ಶ್ರೀದೇವಿ-ಭೂದೇವಿ ಸಹಿತನಾಗಿರುವ ಮಹಾವಿಷ್ಣುದೇವರ ಶಿಲಾಬಿಂಬವು ಅತ್ಯಂತ ಸುಂದರವಾಗಿದ್ದು ಅದೇ ಮೂರ್ತಿಯ ಕಲ್ಲಿನ ಪ್ರಭಾವಳಿಯಲ್ಲಿ ದಶಾವತಾರದ ಸೂಕ್ಷ್ಮ ಕೆತ್ತನೆಗಳು ಶಿಲ್ಪಿಯ ಜಾಣ್ಮೆ,ಕಲಾಪ್ರೌಢಿಮೆ ಮತ್ತು ಪ್ರತಿಭೆಗೆ ಹಿಡಿದ ಕೈಗನ್ನಡಿ.ಬಲಿಮೂರ್ತಿಯು ಚಕ್ರ ಶಂಖ ಗದಾ ಪದ್ಮಗಳನ್ನು ಧರಿಸಿ,ಬಲ ಎದೆಯಲ್ಲಿ ಭೃಗು ಲಾಂಛನ ಹೊಂದಿದ ಪಂಚಲೋಹದ ವಿಗ್ರಹವಾಗಿದೆ.
ಪ್ರಾಣದೇವರು ಕ್ಷೇತ್ರದ ಕಾರಣಿಕ ಶಕ್ತಿಯಾಗಿ ಮೆರೆಯುತ್ತಿದ್ದಾರೆ.ರಾಮಭಕ್ತಿಯ ಸಂಕೇತವಾಗಿ ಕೈ ಮುಗಿದು ಕೊಂಡು ನಿಂತ ಭಂಗಿಯು ಆಕರ್ಷಕವಾಗಿದೆ.ಬಾಲವು ಹಿಂದಲೆಗೆ ಸುತ್ತಿಕೊಂಡ ಅಪರೂಪದ ಮೂರ್ತಿ ಇದಾಗಿದೆ.ಉತ್ತರಾಭಿಮುಖವಾಗಿ ವಿರಳ ಲಭ್ಯವಿರುವ ಈ ಬಿಂಬ ಸನ್ನಿಧಾನಕ್ಕೆ ಪ್ರತಿನಿತ್ಯವೂ ದೇವತೀರ್ಥದಿಂದ ವಾಯುಸ್ತುತಿ,ಬಳಿತ್ಥಾ,ಮನ್ಯುಸೂಕ್ತ ಪಾರಾಯಣಾದಿಗಳು ಸಲ್ಲುತ್ತಿದೆ.
ಉಪಾಧ್ಯಾಯ ಮನೆತನದಿಂದ ರಾಘವೇಂದ್ರ ಉಪಾಧ್ಯಾಯರ ಅರ್ಚಕತ್ವದಲ್ಲಿ ತ್ರಿಕಾಲಗಳಲ್ಲಿ ಪೂಜೆ ನಡೆಯುತ್ತಿದ್ದು ಶನಿವಾರದಂದು ಬೆಳಿಗ್ಗೆ ೭ರಿಂದ ೧೨.೩೦ರವರೆಗೆ ಸಂಜೆ ೫ರಿಂದ ರಾತ್ರಿ ೮ರವರೆಗೆ ಕ್ಷೇತ್ರವು ತೆರೆದಿದ್ದು ಸಾರ್ಧ ಸಪ್ತಮ,ಪಂಚಮ, ಸಪ್ತಮ,ಅಷ್ಟಮ ಶನಿದೋಷ,ಶನಿದಶಾ-ಭುಕ್ತಿ ಕಾಲಗಳಲ್ಲಿನ ಅರಿಷ್ಟ ಪರಿಹಾರಾರ್ಥವಾಗಿ ಮುಖ್ಯಪ್ರಾಣ ಆರಾಧನೆ ಫಲಪ್ರದವಾದ್ದರಿಂದ ಸಾವಿರಾರು ಭಕ್ತಾದಿಗಳು ಭೇಟಿ ನೀಡುತ್ತಾರೆ.
ಕ್ಷೇತ್ರದ ಪರಿವಾರ ಶಕ್ತಿಗಳಾಗಿ ಹೊರಾಂಗಣದಲ್ಲಿ ಬ್ರಹ್ಮ,ನಂದಿಗೋಣ,ರಕ್ತೇಶ್ವರಿ,ಬೊಬ್ಬರ್ಯ,ನಾಗ,ಕ್ಷೇತ್ರಪಾಲರು ಇದ್ದಾರೆ.ಒಂದು ಎಕರೆಯಷ್ಟು ವಿಸ್ತಾರದ ಕೆರೆಯು ದೇವಾಲಯದ ಆಗ್ನೇಯಕ್ಕೆ ನೂರು ಮೀಟರ್ ದೂರದಲ್ಲಿದ್ದು ತಪಸ್ವಿಗಳು ತಪಸ್ಸನ್ನಾಚರಿಸುತ್ತಿದ್ದ ಸ್ಥಳವಿದೆಂದು ಪ್ರತೀತಿ.
ಹಂತ ಹಂತವಾಗಿ ಕ್ಷೇತ್ರವು ಜೀರ್ಣೋದ್ಧಾರಗೊಂಡಿದ್ದು ಇನ್ನು ಗರ್ಭಗುಡಿಯ ಜೀರ್ಣೋದ್ಧಾರ ಗೊಳ್ಳಬೇಕಿದ್ದು ಭಕ್ತಾದಿಗಳ ಸಹಕಾರದ ನಿರೀಕ್ಷೆಯಲ್ಲಿದೆ.
ಪ್ರತಿವರ್ಷ ಮಧ್ವನವಮಿಯಂದು ಭಜನಾಮಂಗಲ, ರಾಮನವಮಿಯಂದು ವಾರ್ಷಿಕ ರಂಗಪೂಜಾದಿ ರಥೋತ್ಸವವು ತಂತ್ರಿಗಳಾದ ವಿ|ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯುತ್ತದೆ.2012 ರಲ್ಲಿ ಪುಣ್ಯಪ್ರದ ರಾಶಿಪೂಜೆಯು ಕ್ಷೇತ್ರದ ಇತಿಹಾಸದಲ್ಲಿ ಮೊದಲಬಾರಿಗೆ ಸಂಪನ್ನಗೊಂಡಿದೆ.
ನಂಬಿದ ಭಕ್ತಗಡಣಕ್ಕೆ ಕಷ್ಟಪರಿಹಾರದ ಮೂಲಕ,ಅಭೀಷ್ಟ ಈಡೇರಿಸುವ ಮೂಲಕ ಕ್ಷೇತ್ರವು ಪ್ರಸಿದ್ಧಿ ಹೊಂದಿದ್ದು, ಗ್ರಹದೋಷಾದಿಗಳಿಗೆ ಶಾಂತಿ, ಪ್ರಾಯಶ್ಚಿತ್ತ ಕರ್ಮಾಂಗಗಳು ನಡೆಯುತ್ತವೆ.